ಟೆಕ್‍ಲಾನ್
ಸಂಶ್ಲೇಷಿತ (ಅಂದರೆ ಮನುಷ್ಯಕೃತ) ಎಳೆಗಳ ಪೈಕಿ ಒಂದು. ಟೆಕ್ ಲಾನ್ ಎಂಬುದು ವಾಣಿಜ್ಯನಾಮ. ಮೋಡಕ್ರಿಲಿಕ್ ಎಂಬ ಒಂದು ಕೋಪಾಲಿಮರ್ ಎಳೆ ಇದು. ವಿನಿಲಿಡೈನ್ ಕ್ಲೋರೈಡ್ ಮತ್ತು ಅಕ್ರಿಲೋನೈಟ್ರಿಲ್ ಎಂಬುವನ್ನು ಸಮತೋಲದಲ್ಲಿ ಬೆರೆಸಿ, ಇತರ ಕೆಲವು ರಾಸಾಯನಿಕಗಳನ್ನು ಅತಿ ಸೂಕ್ಷ್ಮ ಪ್ರಮಾಣದಲ್ಲಿ ಸಂಯೋಜಿಸಿದಾಗ ಟೆಕ್‍ಲಾನ್ ಲಭಿಸುವುದು. ಇದು ವಿವಿಧ ಉದ್ದದ ಎಳೆಗಳಲ್ಲಿ 2,4 ಮತ್ತು 9 ಡೆನಿಯರುಗಳಲ್ಲಿ ದೊರೆಯುತ್ತದೆ. ಟೆಕ್‍ಲಾನಿನ ಘರ್ಷಕ ನಿರೋಧ (ಅಬ್ರೇಷನ್  ರೆಸಿಸ್ಟೆನ್ಸ್) ಸಾಮಥ್ರ್ಯ ಉನ್ನತ ಮಟ್ಟದ್ದು. ಇದು ಕುದಿಯುವ ನೀರಿನಲ್ಲಿ ಅತ್ಯಲ್ಪವಾಗಿ ಸಂಕೋಚಿಸುತ್ತದೆ. ಬಣ್ಣಗಳನ್ನು ಧರಿಸಬಲ್ಲುದು. ಟೆಕ್‍ಲಾನಿಗೆ ದ್ಯುತ್ಯವನತಿಯನ್ನೂ (ಫೋಟೋಡಿಗ್ರೇಡೇಷನ್) ಅತಿ ಸೂಕ್ಷ್ಮಜೀವಿಗಳ ಆಕ್ರಮಣವನ್ನೂ ವಿರೋಧಿಸುವ ಗುಣ ಉಂಟು. ಇದರ ಅಗ್ನಿವಿರೋಧಕ ಗುಣ ಅದ್ವಿತೀಯವಾದದ್ದು. ಟೆಕ್‍ಲಾನ್ ಎಳೆಗಳಿಂದ ನೇಯ್ಗೆ ಹಾಗೂ ಹೆಣಿಗೆ ಸುಲಭ ಸಾಧ್ಯ. ಎಷ್ಟು ಬಾರಿ ತೊಳೆದಾಗ್ಗೂ ಎಳೆಗಳ ಅಗ್ನಿನಿರೋಧ ಗುಣ ಎಂದೂ ನಷ್ಟವಾಗುವುದಿಲ್ಲ. ಆಮ್ಲ ಮತ್ತು ಅತ್ಯಂತ ಸಾಮಾನ್ಯ ರಾಸಾಯನಿಕ ವಸ್ತುಗಳ ಪರಿಣಾಮಗಳನ್ನು ಎದುರಿಸುವ ಗುಣ ಈ ಎಳೆಗಳಿಗಿದೆ. ಇಷ್ಟಾಗಿಯೂ ಇದು ನೈಲಾನ್ ಮತ್ತು ಟೆರಿಲೀನುಗಳಿಗಿಂತ ಕಡಿಮೆ ಬೆಲೆಯುಳ್ಳದ್ದು. ಟೆಕ್‍ಲಾನನ್ನು ಚಲನ ಚಿತ್ರಮಂದಿರ ಇತ್ಯಾದಿ ಪ್ರದರ್ಶನ ಮಂದಿರಗಳಲ್ಲಿ ಪೀಠೋಪಕರಣಗಳ ಅಲಂಕಾರೋದ್ಯಮಗಳಲ್ಲಿ ಉಪಯೋಗಿಸಲಾಗುತ್ತದೆ.

ಟೆಕ್‍ಲಾನ್ ಮತ್ತು ಪಾಲಿಥೀನುಗಳ ಮಿಶ್ರಣದಿಂದ ಅಗ್ನಿನಿರೋಧಕ ಒಂದೇ ಅಲ್ಲದೆ ದ್ರವ ಚೂರ್ಣಾದಿಗಳಿಗೂ ನಿರೋಧಕವಾದ (ಲಿಕ್ವಿಡ್ ಅಂಡ್ ಪೌಡರ್ ಪ್ರೂಫ್) ಒಂದು ಬಗೆಯ ವಸ್ತ್ರವನ್ನು ನೇಯುತ್ತಾರೆ. ಅಗ್ನಿನಿರೋಧಕ ವಸ್ತ್ರ ಮೋಡಕ್ರಿಲಿಕ್ ಮತ್ತು ಎಳೆಗಾಜುಗಳ ತಿರುಳು ನೂಲುವಿಕೆಯಿಂದ (ಕೋರ್ ಸ್ಪನ್) ತಯಾರಿಸಲ್ಪಟ್ಟು ಗಾಜಿನ ಘಟಕ ನೇಯುವವನ ತ್ವಕ್ ಸ್ಪರ್ಶವಾಗದಂತಿರುತ್ತದೆ. ಟೆಕ್‍ಲಾನಿನ ಅದ್ವಿತೀಯ ಅಗ್ನಿನಿರೋಧಕ ಗುಣದಿಂದಾಗಿ ಕ್ಷೇಮಕರವಾದ ಮಕ್ಕಳ ಬಟ್ಟೆಗಳನ್ನೂ ಅಗ್ನಿಶಾಮಕ ದಳದವರ ಮತ್ತು ಲೋಹ ಸಂಯೋಜಕರ ಬಟ್ಟೆಗಳನ್ನೂ ತಯಾರಿಸಲು ಇದು ಉಪಯೋಗವಾಗುತ್ತದೆ. ಈ ಬಟ್ಟೆಗಳು ನೇರ ಬೆಂಕಿ ಮತ್ತು ಶಾಖ ವಿಕಿರಣವನ್ನು ತಡೆಯುತ್ತವೆ. ರಕ್ಷಕ ವಸ್ತ್ರವಾಗಿ ಅಲ್ಲದೆ ಸಾಮಾನ್ಯೋಪಯೋಗ ವಸ್ತ್ರ ಮತ್ತು ಕಾರ್ಮಿಕ ಸರ್ವತ್ರೋಪಯೋಗ ವಸ್ತ್ರಕ್ಷೇತ್ರಗಳಲ್ಲೂ ಇದರ ಬಳಕೆ ಉಂಟು. 					(ಕೆ.ಬಿ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ